ನಂಜಣಾರ್ಯ
ಸು.1650. ಏಕೋರಾಮೇಶ್ವರ ಪುರಾಣ ಮತ್ತು ನೀತಿರತ್ನಾಭರಣಗಳ ಕರ್ತೃ. ವೀರಶೈವ. ಸ್ಥಳ ಹರದಿಹಳ್ಳಿ. ಏಕೋರಾಮೇಶ್ವರ ಪುರಾಣದಲ್ಲಿ ತನ್ನ ವಂಶಪರಂಪರೆಯ ಬಗೆಗೆ ವಿಸ್ತಾರವಾಗಿ ತಿಳಿಸಿದ್ದಾನೆ ಅದರಂತೆ ಈತನ ತಂದೆ ಏಕೋತ್ತರಶತಸ್ಥಲ ವಿಶಾರದ ವೀರಣಾಚಾರ್ಯ.

ಈತ ತನ್ನನ್ನು ಕುರಿತು ಪರಮಾವಬೋಧಪ್ರಸಂಗಿ, ತ್ರಿಲಿಂಗಸಂಯೋಗಿ, ಸರಸಲಕ್ಷಣಕಾವ್ಯ ರಚಿತನವಭಾವಕಂ ಹರ ಕವೀಶ್ವರಣುಗ, ಭೋಗಮಲ್ಲೇಶನಲೆಂಕಂ ಇತ್ಯಾದಿಯಾಗಿ ವಿಶೇಷಿಸಿಕೊಂಡಿದ್ದಾನೆ. ಏಕೋರಾಮೇಶ್ವರ ಪುರಾಣದ ಕಥೆಯನ್ನು ಸಿದ್ಧರಾಮ ಗುರುವರನು ತನಗೆ ಮೊದಲು ಉಪದೇಶಿಸಿದನೆಂದೂ ಅನಂತರ ಅದನ್ನು ತಾನು ಪುರಾಣವಾಗಿ ಬರೆದಿರುವೆನೆಂದೂ ತಿಳಿಸಿದ್ದಾನೆ.

ಕೃತಿಯ ಮೊದಲಲ್ಲಿ ಏಕೋರಾಮ, ಸಿದ್ಧರಾಮೇಶ, ಮುದ್ರಾಪುರಾಧೀಶ, ರಾಮಲಿಂಗ, ಶಿವ, ಭೃಂಗಿ, ಪಾರ್ವತಿ, ವೃಷಭೇಂದ್ರ, ವೀರಭದ್ರ, ವಿಘ್ನರಾಜ, ಷಣ್ಮುಖ, ರುದ್ರ ಮೊದಲಾದವರ ಪ್ರಾರ್ಥನೆಯಿದೆ. ಅನಂತರ ಉದ್ಭಟ, ಮಯೂರ, ಬಿಲ್ಹಣ, ಕಾಳಿದಾಸ, ರಾಘವಾಂಕಪಂಡಿತ, ಬಾಣ, ಪುಷ್ಪದಂತ, ಮಲಯರಾಜ, ಹಲಾಯುಧ, ಭೋಜ, ಸೌಂದರಗಣೇಶ್ವರ, ಕೇಶಿರಾಜರಿಗೆ ಕವಿ ನಮಸ್ಕರಿಸಿದ್ದಾನೆ.

ಏಕೋರಾಮೇಶ್ವರಪುರಾಣ ವಾರ್ಧಕಷಟ್ಪದಿಯಲ್ಲಿದ್ದು 16 ಕಾಂಡಗಳು, 16 ಸಂಧಿಗಳು ಮತ್ತು 1463 ಪದ್ಯಗಳನ್ನು ಹೊಂದಿದೆ. ಇದರ ಕಥೆ ಇಷ್ಟು: ಈಶ್ವರನ ಆಜ್ಞೆಯಂತೆ ಘಂಟಾಕರ್ಣಗಣೇಶ್ವರ ಏಕೋರಾಮನೆಂಬ ಹೆಸರಿನಿಂದ ಮುದ್ರಪುರದ ರಾಮರುದ್ರ ಶಿವಾಚಾರ್ಯನಿಗೆ ಸುತನಾಗಿ ಹುಟ್ಟಿ ರಾಮನಾಥನಿಂದ ದೀಕ್ಷಿತನಾದ. ಮುಂದೆ ಆ ಪುರದ ಅರಸ ವೀರಭಾಸ್ಕರರಾಯನ ಸಮಕ್ಷಮದಲ್ಲಿ ವೈಷ್ಣವರೊಡನೆ ವಾದಿಸಿ ಶಿವಾಧಿಕ್ಯ ಮತ್ತು ಶಿವಭಕ್ತರ ಶ್ರೇಷ್ಟತೆಯನ್ನು ಸ್ಥಿರೀಕರಿಸಿದ. ಅನಂತರ ರಾಮಲಿಂಗನಿಂದ ಗುರುಪದ್ಮವನ್ನು ಹೊಂದಿ, ವೈಷ್ಣವರಿಗೆ ವೀರಶೈವ ದೀಕ್ಷೆಯನ್ನು ಕೊಟ್ಟ. ಮುಂದೆ ಅಯೋಧ್ಯಾನಗರಿಯ ವ್ಯಾಸದೀಕ್ಷಿತನೊಡನೆ ವಾದಿಸಿ ಕೊನೆಯಲ್ಲಿ ಆತನನ್ನು ಮತಾಂತರಗೊಳಿಸಿದ. ಕಡೆಗೆ ಶಂಕುಕರ್ಣನೆಂಬ ತನ್ನ ಶಿಷ್ಯನಿಗೆ ಗುರುಪಟ್ಟವನ್ನು ಕಟ್ಟಿ ರಾಮನಾಥನ ದೇವಾಲಯಕ್ಕೆ ಹೊಗಲು ಅಲ್ಲಿ ಶಿವ ಪ್ರತ್ಯಕ್ಷನಾಗಿ ದರ್ಶನಕೊಟ್ಟು ಆತನನ್ನು ಕೈಲಾಸಕ್ಕೆ ಒಯ್ದ.

ಪುರಾಣೋಕ್ತ ಮುದ್ರಾಪುರ ಇಂದಿನ ಕಲ್ಬುರ್ಗಿ ಜಿಲ್ಲೆಯ ಮುದನೂರು ಆಗಿದ್ದು ಇಂದೂ ಅಲ್ಲಿನ ರಾಮನಾಥ ದೇವಾಲಯ ಪ್ರಸಿದ್ಧಿ ಹೊಂದಿದೆ. ಈ ಪುರಾಣದ ಕಥಾನಾಯಕನಾದ ಏಕೋರಾಮಾರಾಧ್ಯ ವೀರಶೈವ ಪಂಚಾಚಾರ್ಯರಲ್ಲಿ ಒಬ್ಬನಾಗಿದ್ದು ಸಂಸ್ಕøತದಲ್ಲಿ ಸಮನ್ವಯಸೂತ್ರವೆಂಬ ಕೃತಿಯನ್ನು ಬರೆದಂತೆ ಶ್ರೀಕರಭಾಷ್ಯದಿಂದ ತಿಳಿದುಬರುತ್ತದೆ. ಅಲ್ಲದೆ ಈತ ಕನ್ನಡದಲ್ಲಿ ವಚನಗಳನ್ನು ರಚಿಸಿರುವುದರ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ.

ಈ ಪುರಾಣದ ಕೆಲವು ಪದ್ಯಗಳು ಸಂಪಾದನೆ ಸಿದ್ಧವೀರಣಾಚಾರ್ಯನ ಸಂಕಲಿತ ಕೃತಿ ಲಿಂಗಸ್ತೋತ್ರ ಷಟ್ಪದಿಯಲ್ಲಿ ಉಲ್ಲೇಖಗೊಂಡಿವೆ. ನೀತಿರತ್ನಾಭರಣವನ್ನು ಈತ ಪರಮ ಗುರುಸಿದ್ಧಶಾಂತೇಶ್ವರನ ಪ್ರೇರಣೆಯಿಂದ ರಚಿಸಿದ್ದುದಾಗಿ ಹೇಳಿಕೊಂಡಿದ್ದಾನೆ. ಇದರಲ್ಲಿ 169 ಕಂದಗಳಿವೆ.	
(ಎನ್.ಎಸ್‍ಎಚ್‍ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ